ನಿಜಗಲ್ಲು
	ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಾಯವ್ಯ ಮೂಲೆಯಲ್ಲಿರುವ ಒಂದು ಹಳ್ಳಿ. ಜನಸಂಖ್ಯೆ 337 (1971). ಈ ಹಳ್ಳಿಗೆ ಹೊಂದಿಕೊಂಡಂತೆ ಕಡಿದಾದ ಮತ್ತು ಉನ್ನತವಾದ ಬೆಟ್ಟವೊಂದಿದೆ. ಒಂದು ಕಾಲಕ್ಕೆ ಇದು ದುರ್ಗಮವಾದ ಗಿರಿದುರ್ಗವೆಂದು ಪ್ರಸಿದ್ಧವಾಗಿತ್ತು. ಈ ಬೆಟ್ಟವನ್ನೇರಲು ಉತ್ತರ ಮತ್ತು ಪೂರ್ವ ದಿಕ್ಕುಗಳಿಂದ ಮಾತ್ರ ಸಾಧ್ಯ. ಉಳಿದ ಕಡೆ ಕಡಿದಾದ ಬೆಟ್ಟವೇ ಸ್ವಾಭಾವಿಕ ರಕ್ಷಣೆ. ಹೊಯ್ಸಳರ ಕಾಲದಿಂದಲೇ ಯುದ್ಧಕಾಲದಲ್ಲಿ ಇದು ಒಂದು ಆಶ್ರಯಸ್ಥಾನವಾಗಿದ್ದಂತೆ ತೋರುತ್ತದೆ. ಇಲ್ಲಿ ಹಲವಾರು ಯುದ್ಧಗಳು ಜರುಗಿವೆ. ಆದ್ದರಿಂದ ಇದಕ್ಕೆ ಶೂರಗಿರಿ ಎಂದು ಹೆಸರು ಪ್ರಚಲಿತವಿತ್ತು. ಮೈಸೂರಸರು ಇದನ್ನು ಗೆದ್ದಮೇಲೆ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಈ ದುರ್ಗಕ್ಕೆ ಭದ್ರವಾದ ಕೋಟೆಯನ್ನು ಕಟ್ಟಿಸಲಾಗಿತ್ತು. ಇಲ್ಲಿ ಕೆಲವು ದೇವಾಲಯಗಳು ನಿರ್ಮಿತವಾದವು.

	ಬೆಟ್ಟದ ಇಳಿಜಾರಿನಲ್ಲಿ ವೀರಭದ್ರ ದೇವಾಲಯವೂ ಒಂದು ವೀರಶೈವ ಮಠವೂ ಇವೆ. ಹನ್ನೆರಡು ಅಡಿ ಎತ್ತರದ ವೀರಭದ್ರ ಮೂರ್ತಿಯನ್ನು ಒಂದು ಉನ್ನತವಾದ ಕಲ್ಲಿನ ಹಲಗೆಯ ಮೇಲೆ ಬಿಡಿಸಿದೆ. ಇದರ ಇಕ್ಕೆಲಗಳಲ್ಲಿ ದಕ್ಷ ಮತ್ತು ಭದ್ರಕಾಳಿಯ ಮೂರ್ತಿಗಳಿವೆ. ವೀರಭದ್ರನ ಮೂರ್ತಿಯ ಬಳಿಯಲ್ಲಿಯೇ ಕಾಕಸ್ವಾಮಿ ಎಂಬ ಒಬ್ಬ ಭಕ್ತನ ಮೂರ್ತಿ ಇದೆ. ಬೆಟ್ಟಕ್ಕೆ ಹತ್ತುವ ದಾರಿಯಲ್ಲಿ ಬಂಡೆಯೊಂದರ ಮೇಲೆ ಇರುವ ಮತ್ತೊಂದು ಮೂರ್ತಿಯನ್ನು ಕೋಡಿಯಪ್ಪ ಎಂದು ಪೂಜಿಸುತ್ತಾರೆ. ಬೆಟ್ಟದ ತುದಿಯಲ್ಲಿರುವ ಕೋಟೆಯೊಳಗೆ ಮದ್ದಿನ ಮನೆಗಳು, ಕಣಜಗಳು ಮತ್ತು ಅಲ್ಲಿ ಆಳುತ್ತಿದ್ದ ನಾಯಕರ ಮನೆಗಳ ಅವಶೇಷಗಳು ಇವೆ. ಕಂಚಿನ ದೊಣೆ, ಆನೆಯ ದೊಣೆ, ಸಿದ್ಧರ ದೊಣೆ, ಅಕ್ಕತಂಗಿಯರ ದೊಣೆ ಮೊದಲಾದ ಹಲವು ದೊಣೆಗಳೂ ಇವೆ. ತಣ್ಣನೆಯ ಶುಭ್ರವಾದ ನೀರಿನಿಂದ ತುಂಬಿರುವ ಸಿದ್ಧರ ದೊಣೆ ಹಿಂದೂ ಮುಸ್ಲಿಮರಿಬ್ಬರಿಗೂ ಪವಿತ್ರವಾದ ತೀರ್ಥವೆಂದು ಪರಿಗಣಿತವಾಗಿದೆ. ಬಳಿಯಲ್ಲಿಯೇ ಇರುವುದು ರಸಸಿದ್ಧರ ದೇವಾಲಯ. ಇಲ್ಲಿ ಒಬ್ಬ ಋಷಿಯ ತಲೆಯ ಆಕೃತಿಯನ್ನು ಪೂಜಿಸುತ್ತಾರೆ. ಈ ಗುಡಿಯಲ್ಲಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರಗಳಂದು ಹಿಂದೂಗಳು ಪೂಜೆ ಸಲ್ಲಿಸಿದರೆ, ಆ ದಿನಗಳಲ್ಲಿ ಸಿದ್ಧರದೊಣೆಯಲ್ಲಿ ಮುಸಲ್ಮಾನರು ಪೂಜೆ ಸಲ್ಲಿಸುತ್ತಾರೆ. ಸಿದ್ಧರು ಕೀಳು ಲೋಹಗಳನ್ನು ಬಂಗಾರವಾಗಿ ಪರಿವರ್ತಿಸಬಲ್ಲ ರಸವನ್ನು ತಯಾರಿಸಿದ್ದುದರಿಂದ ಈ ಬೆಟ್ಟಕ್ಕೆ ರಸಸಿದ್ಧರ ಬೆಟ್ಟ ಎಂಬ ಹೆಸರು ಬಂದುದಾಗಿ ಐತಿಹ್ಯವಿದೆ. ಅಕ್ಕತಂಗಿಯರ ದೊಣೆಯ ಬಳಿ ಚಿಕ್ಕದೇವರಾಜ ಒಡೆಯರ ಅಧಿಕಾರಿ ದಾಸರಾಜಯ್ಯ ಕಟ್ಟಿಸಿದ ದೊಡ್ಡದಾದ ನರಸಿಂಹ ದೇವಾಲಯ ಈಗ ಪಾಳಾಗಿ ನಿಂತಿದೆ. ಅಲ್ಲಿಂದ ಕೆಳಗೆ ಇಳಿದರೆ ಮುಸಲ್ಮಾನರ ಒಂದು ದರ್ಗ ಸಿಗುತ್ತದೆ. ಹಿಂದೂ ಮುಸಲ್ಮಾನರಿಬ್ಬರಿಗೂ ಪವಿತ್ರವಾದ ಈ ಬೆಟ್ಟದ ಮೇಲೆ ಇವರಿಬ್ಬರ ಪೂಜಾಗೃಹಗಳು ಅಕ್ಕಪಕ್ಕದಲ್ಲಿರುವುದು ವೈಶಿಷ್ಟ್ಯ. ಬೆಟ್ಟದ ಇಳಿಜಾರಿನಲ್ಲಿರುವ ಗವಿಯೊಂದರಲ್ಲಿ ಶಿವದೇವಾಲಯವೊಂದಿದೆ. ಬಂಡೆಗಲ್ಲುಗಳಿಂದ ಆವೃತವಾದ ಆ ದೇವಾಲಯದ ಹೊರಭಾಗದಲ್ಲಿ ಗಣಪತಿ, ವೀರಭದ್ರ ಮತ್ತು ಸುಬ್ರಹ್ಮಣ್ಯರ ಮೂರ್ತಿಗಳನ್ನು ನೋಡಬಹುದು.

	ಮೈಸೂರಿನ ಅರಸರ ಕಾಲದಲ್ಲಿ ಅವರಿಗೆ ಅಧೀನರಾಗಿ ಇಲ್ಲಿ ಆಳುತ್ತಿದ್ದ ಪಾಳೆಯಗಾರ ರಾಮರಸ ನಾಯಕನ ಆಳ್ವಿಕೆಯಲ್ಲಿ ಮರಾಠರು ಇದನ್ನು ಮುತ್ತಿದುದಾಗಿಯೂ ಆಗ ವಿದ್ರೋಹದಿಂದ ನಾಯಕನನ್ನು ಕೊಲ್ಲಿಸಿದ ತನ್ನ ತಮ್ಮನೊಡನೆ ಕಿರಿಯ ರಾಣಿ ಆತ್ಮಾರ್ಪಣೆ ಮಾಡಿಕೊಂಡಳೆಂದೂ ಕಥೆ ಜನಜನಿತವಾಗಿದೆ. ಶ್ರೀನಿವಾಸರು ಅವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ.
(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ